ಯಕ್ಷಮಿತ್ರ ಟೊರೊಂಟೊ ತಂಡದ ಮೂರನೇ ವರ್ಷದ ತಿರುಗಾಟ (೨೦೧೧) ಯಶಸ್ವಿಯಾಗಿ ಪೂರ್ಣಗೊಂಡಿ ದೆ. ಉತ್ತರ ಅಮೆರಿಕಾದ ವಿವಿಧ ಸ್ಥಳಗಳಲ್ಲಿ ೪ ಪ್ರದರ್ಶನಗಳನ್ನು ಈ ವರ್ಷದ ತಿರುಗಾಟದಲ್ಲಿ ಪ್ರದರ್ಶಿಸಲಾಯಿತು. ಮೂರು ಭಸ್ಮಾಸುರ-ಮೋಹಿನಿ ಪ್ರಸಂಗಗಳು ಮತ್ತು ಒಂದು ಕೃಷ್ಣ ಸಂಧಾನ ಪ್ರಸಂಗ ಪ್ರದರ್ಶಿತಗೊಂಡವು. ಈ ವರ್ಷದ ಮೊತ್ತ ಮೊದಲ ಪ್ರದರ್ಶನ ಚಿಕಾಗೊದಲ್ಲಿ ಜುಲೈ ೨ ನೆ ತಾರೀಕು ಅಮೆರಿಕಾದ ಹವ್ಯಕ ಸಮ್ಮೇಳನದ ಪ್ರಯುಕ್ತ. ಅಂದಿನ ಪ್ರಸಂಗ ಭಸ್ಮಾಸುರ-ಮೋಹಿನಿ. ನಂತರ ಸೆಪ್ಟೆಂಬರ್ ೩ ನೆ ತಾರೀಕು ಟೊರೊಂಟೊದ ಶ್ರೀಕೃಷ್ಣ ಬೃಂದಾವನದಲ್ಲಿ, ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮಿಗಳ ಚಾತುರ್ಮಾಸ್ಯದ ಪ್ರಯುಕ್ತ, ಶ್ರೀಗಳ ಸಮ್ಮುಖದಲ್ಲಿ, ಶ್ರೀ ಕೃಷ್ಣ ಸಂಧಾನ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಶ್ರೀ ಕೃಷ್ಣವೄಂದಾವನದ ವೇದಿಕೆಯ ಉದ್ಘಾಟನೆಯೂ ಆಮೂಲಕ ಆಯಿತು. ತದನಂತರ ಸೆಪ್ಟೆಂಬರ್ ೨೫ ರಂದು ವರ್ಷದ ಪ್ರದರ್ಶನ, ಟೊರೊಂಟೊದ ಯಾರ್ಕ್ ವುಡ್ ಲೈಬ್ರರಿಯಲ್ಲಿ ಏರ್ಪಡಿಸಿದ್ದೆವು. ಸುಮಾರು ೨೫೦ ಜನ ಅಪ್ಪಟ ಯಕ್ಷಗಾನದ ಅಭಿಮಾನಿಗಳು ಟಿಕೆಟ್ ಕೊಂಡು ಯಕ್ಷಗಾನವನ್ನು ಪ್ರೋತ್ಸಾಹಿಸಿದರು. ನವೆಂಬರ್ ೫ ನೆ ತಾರೀಕು ನ್ಯೂ ಯಾರ್ಕ್ ರಾಜ್ಯದ ಅಲ್ಬನಿ ಯಲ್ಲಿ ವರ್ಷದ ಕೊನೆಯ ಆಟ ಭಸ್ಮಾಸುರ ಮೋಹಿನಿ ಪ್ರದರ್ಶಿತವಾಯಿತು. ಯಕ್ಷಗಾನವನ್ನು ಮೊದಲ ಬಾರಿ ನೋಡುತ್ತಿರುವವರೇ ಸಭೆಯಲ್ಲಿ ತುಂಬಿ ದ್ದ ಪ್ರದರ್ಶನ ಇದಾಗಿತ್ತು. ಯಕ್ಷಗಾನದ ಹೊಸ ಪ್ರೇಕ್ಷಕರು ಯಕ್ಷಗಾನವನ್ನು ಬಹುವಾಗಿ ಮೆಚ್ಚಿಕೊಂಡು ಇನ್ನು ಎಲ್ಲೇ ಸಮೀಪದಲ್ಲಿ ಯಕ್ಷಗಾನ ಪ್ರದರ್ಶನ ಇದ್ದರೂ ತಪ್ಪದೆ ಹಾಜರು ಇರುವುದಾಗಿ ಹೇಳಿದರು. ಈ ಎಲ್ಲಾ ಕಾರ್ಯಕ್ರಮಗಳ ಸಮರ್ಥ ನಿರ್ವಹಣೆ ನೆಡೆದಿದ್ದು ಎಂದಿನಂತೆ ಶ್ರೀಮತಿ ಮತ್ತು ಶ್ರೀ ಪರಮೇಶ್ವರ ಭಟ್ಟರು ಅವರಿಂದ. ಇದಲ್ಲದೆ, ನಮ್ಮೆಲ್ಲ ಸ್ನೇಹಿತವರ್ಗದ ಸಹಕಾರ ಕಾರ್ಯಕ್ರಮಗಳು ಯಶಸ್ವಿಯಾಗುವುದಕ್ಕೆ ಕಾರಣ.
ಈ ವರ್ಷ ಯಕ್ಷಮಿತ್ರ ತಂಡಕ್ಕೆ ವೇಷಧಾರಿಗಳಾಗಿ ಮುಖ್ಯ ಸ್ತ್ರೀಪಾತ್ರದಲ್ಲಿ ಶ್ರೀಮತಿ ಬಿಂದು ಉಡುಪ, ಹಾಸ್ಯದಲ್ಲಿ ಯುವ ಉತ್ಸಾಹಿ ನಿಮೀಷ್ ಹೆಗಡೆ ಮತ್ತು ಖಾಯಂ ಮದ್ದಲೆಗಾರನಾಗಿ ಯುವ ಕಲಾವಿದ ೧೧ ವರ್ಷದ ಶ್ರೀಧರ ಮಧ್ಯಸ್ಥ ಅವರ ಸೇರ್ಪಡೆ ತಂಡದ ಪ್ರದರ್ಶನ ಕಳೆಗಟ್ಟಲು ಕಾರಣವಾಯಿತು. ಟೊರೊಂಟೊದ CBC radio, ಮೇಳದ ಕಲಾವಿದ ರಾಗು ಕಟ್ಟಿನಕೆರೆ ಅವರನ್ನು ಯಕ್ಷಮಿತ್ರ ಶುರುವಾದ ರೀತಿ ಮತ್ತು ವೈಯಕ್ತಿಕ ಆಸಕ್ತಿಯ ಬಗ್ಗೆ ಸಂದರ್ಶನ ಮಾಡಿ ಪ್ರಸಾರ ಮಾಡಿತು. ಅನೇಕ ಮಿತಿಗಳ ನಡುವೆಯೂ ಉತ್ತಮ ಪ್ರದರ್ಶನಗಳನ್ನು ನೀಡಿ, ಯಕ್ಷಗಾನದ ಸಾಂಪ್ರದಾಯಿಕ ಪ್ರೇಕ್ಷಕರನ್ನು ರಂಜಿಸುವುದರ ಜೊತೆಗೆ ಹೊಸ ಪ್ರೇಕ್ಷಕರನ್ನು ಯಕ್ಷಗಾನಕ್ಕೆ ಸೆಳೆದ ತೃಪ್ತಿ ಯಕ್ಷಮಿತ್ರ ತಂಡಕ್ಕೆ ಇದೆ. ಅದೇ ರೀತಿ ಜನರ ನಿರೀಕ್ಷೆ ಹೆಚ್ಚಾಗು ತ್ತಾ ಇರುವುದರಿಂದ, ಮುಂದಿನ ವರ್ಷ ಇನ್ನು ಉತ್ತಮ ಪ್ರದರ್ಶನ ನೀಡುವ ಜವಾಬ್ದಾರಿಯೂ ತಂಡದ ಮೇಲೆ ಇದೆ. ಅನೇಕ ರೀತಿಯಿಂದ ನಮ್ಮನ್ನೆಲ್ಲ ಪ್ರೋತ್ಸಾಹಿಸಿ, ನಮಗೆ ಸಹಕಾರ ನೀಡಿದ ಮತ್ತು ನೀಡುತ್ತಿರುವ ಎಲ್ಲಾ ಸಹೃದಯರಿಗೆ ನಮ್ಮ ಕೃತಜ್ಞತೆಗಳು.
For more photos visit our album: http://picasaweb.google.com/yaxamitra
For more photos visit our album: http://picasaweb.google.com/yaxamitra